ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಗಳೂರು: ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ರಾಜಕೀಯ: ಸಚಿವ ಮಧು ಬಂಗಾರಪ್ಪ

ಮಂಗಳೂರು: ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ರಾಜಕೀಯ: ಸಚಿವ ಮಧು ಬಂಗಾರಪ್ಪ

Tue, 16 Jan 2024 06:15:10  Office Staff   Vb

ಮಂಗಳೂರು:  ದೇವರು ಮತ್ತು ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಜೆಪಿಗರ ಕೆಟ್ಟ ಚಾಳಿಯಾಗಿದೆ. ಈಗ ರಾಮನನ್ನು ತಗೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಕಾಂಗ್ರೆಸ್ಸಿಗರು ನಿಜವಾದ ರಾಮಭಕ್ತರಾಗಿದ್ದು, ನಮಗೆ ಎಲ್ಲ ಸಮಾಜ, ಧರ್ಮದ ಬಗ್ಗೆ ಅಪಾರ ಗೌರವ ಇದೆ. ಆದರೆ ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಮಧು ಬಂಗಾರಪ್ಪ, ರಾಮ ಮಂದಿರ ಉದ್ಘಾಟನೆಗೆ ಕರೆಯದಿದ್ದರೂ ಇಲ್ಲಿಂದಲೇ ರಾಮನನ್ನು ನಂಬುತ್ತೇವೆ ಎಂದು ಹೇಳಿದರು. ಹಿಂದೂ, ಹಿಂದೂ ಎಂದು ಹೇಳಿಕೊಂಡು ಹೋದರೆ ಸಾಲದು. ಎಲ್ಲಾ ಧರ್ಮವನ್ನೂ ಗೌರವಿಸಬೇಕು. ಹಿಂದೂ ಎನ್ನುತ್ತಾ ಕರಾವಳಿ ಭಾಗದಲ್ಲಿ ಶಾಂತಿ ಕದಡಿರುವುದನ್ನು ಜನತೆ ನೋಡಿದ್ದಾರೆ. ಮತ ಬ್ಯಾಂಕ್‌ಗಾಗಿ ಹಿಂದುತ್ವ ಮಾಡುವ ಕೆಲಸ ಬಿಜೆಪಿಗರದ್ದಾಗಿದೆ. ಅವಕಾಶ ಸಿಕ್ಕರೆ ನಾನು ಅಯೋಧ್ಯೆಗೆ ಮಾತ್ರವಲ್ಲ ಮಸೀದಿ, ಚರ್ಚ್‌ಗೂ ಹೋಗುತ್ತೇನೆ. ಆದರೆ ಬಂಗಾರಪ್ಪರ ಮಗನಾಗಿ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿ ದೇವರ ಹೆಸರಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದರು.

ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಾರಣ: ರಾಜ್ಯ ದಲ್ಲಿ ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲು ಕಾರಣ. ಬಂಗಾರಪ್ಪ ಕೊಟ್ಟ ಭಿಕ್ಷೆಯಲ್ಲಿ ನಳಿನ್ ಅಧಿಕಾರ ಪಡೆದಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಸಾವಿನಲ್ಲಿ ರಾಜಕೀಯ ಮಾಡುತ್ತಿ ದ್ದಾರೆ. ಬಂಗಾರಪ್ಪ ಹೆಸರಿನಲ್ಲಿ ನಳಿನ್ ಇಲ್ಲಿ ಸಂಸದರಾಗಿ ದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ಸಂಸದರ ವಿರುದ್ಧ ಧಿಕ್ಕಾರ ಕೂಗಿದ್ದು ಕಾಂಗ್ರೆಸ್‌ನವರಲ್ಲ. ಬಿಜೆಪಿ, ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಸೇರಿ ನಳಿನ್‌ರ ಕಾರು ಅಲುಗಾಡಿಸಿದ್ದರು ಎಂಬುದು ನಳಿನ್‌ಗೆ ನೆನಪಿರಲಿ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

*ನಳಿನ್ ಮತ್ತೆ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ನಾನೇ ಇಲ್ಲಿಗೆ ಬರುತ್ತೇನೆ. ನಾನು ಯಾರ ಮೇಲೂ ವೈಯಕ್ತಿಕವಾಗಿ ಹೋಗಲ್ಲ. ಆದರೆ ನಳಿನ್ ನನ್ನ ರಾಜೀನಾಮೆ ಕೇಳಿದ್ದರು. ಅದಕ್ಕಾಗಿ ಅವರನ್ನು ಸೋಲಿಸಲೇಬೇಕಿದೆ. ನಳಿನ್ ಇಲ್ಲಿ ಹಿಂದುತ್ವ ಮತ್ತು ಭಾವನಾತ್ಮಕವಾಗಿ ಗೆದ್ದಿದ್ದಾರೆ. ಅವರು ಮಾಡಿದ ಅಭಿವೃದ್ಧಿ ಶೂನ್ಯ. ಮೋದಿ ಹೆಸರು ಹೇಳಿದ್ದನ್ನು ಬಿಟ್ಟರೆ ಅವರು ಬೇರೆ ಏನು ಮಾಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

*ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಉಸ್ತುವಾರಿ ಸಚಿವರೇ ಹೊಣೆ ಎಂಬ ಹೈಕಮಾಂಡ್ ಎಚ್ಚರಿಕೆಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಹೈಕಮಾಂಡ್ ಹೇಳಿದ್ದರಲ್ಲಿ ತಪ್ಪಿಲ್ಲ. ಮತ್ತೆ ಅಧಿಕಾರ ಪುಕ್ಸಟ್ಟೆ ಬರುತ್ತಾ? ಸುಮ್ಮನೆ ಪ್ರಚಾರಕ್ಕೆ ಹೋಗಿ ಬಂದರೆ ಆಗುತ್ತಾ? ಜವಾಬ್ದಾರಿ ವಹಿಸಬೇಕು. ಹೊಣೆ ಹೊರಬೇಕು ಎಂದರು.


Share: